ಅವನೊಮ್ಮೆ ಹುಟ್ಟಿ ಬಂದಿದ್ದರೇ...!!
ಆತ ಪರಮ ಸುಂದರನಂತೆ,ನಮ್ಮ ಉಸಿರು ಅಥವಾ ಪ್ರಾಣಾತ್ಮ ಅವನೇ ಆಗಿದ್ದಾನಂತೆ,ಸ್ತ್ರೀ ಲೋಲನಂತೆ ಆ ದೇವೋತ್ತಮ..ಆತ ನಮ್ಮೆಲ್ಲರಲ್ಲೂ ಬೆರೆತು ಹೋಗಿದ್ದಾನಂತೆ ಅವನನ್ನು ನಾವೇ ಕಂಡುಕೊಳ್ಳಬೇಕಂತೆ..!ಆತನೇ ಪ್ರತೀ ಜೀವಿಯ ಪರಮ ಗುರಿಯಂತೆ..ಅವನ ಭಕ್ತರಿಗೆ ಸೋಲೇ ಇಲ್ಲವಂತೆ ಹಾಗೆ ಅವನನ್ನರಿಯುವುದೂ ಅತೀ ಕಷ್ಟವಂತೆ.. ಅಷ್ಟೇ ಅಲ್ಲ ಬೃಂದಾವನದ ಗೋಪಿಯರು ಸಂಪೂರ್ಣವಾಗಿ ಇವನಿಗೆ ಶರಣಾಗಿದ್ದರಂತೆ,ಇವನ ಒಂದು ನೋಟ,ಮಾತು,ಪ್ರೀತಿಗಾಗಿ ನಿದ್ರಾಹಾರವಿಲ್ಲದೆ ಹಪಹಪಿಸುತ್ತಿದ್ದರಂತೆ.. ಅದೆಲ್ಲಾ ಜೀವಿಗಳ ಪರಮ ಪ್ರಭು "ಕೃಷ್ಣ " ನಂತೆ.... ಇನ್ನೂ ಏನೇನೋ....!!
ಅದೆಷ್ಟೋ ಗೋಪಿಯರು ಕೃಷ್ಣನಿಗಾಗಿ ತಮ್ಮದೆಲ್ಲವನ್ನೂ ಧಾರೆ ಎರೆದು ಅವನಿಗಾಗಿ ವಿರಹ ತಾಳಿದ್ದರೆಂದರೇ ಅವನೆಷ್ಟು ಸುಂದರನಿದ್ದಿರಬಹುದು? ಸೋದರಮಾವ ಕಂಸನನ್ನು ಸದೆಬಡಿಯಲು ಮಥುರೆಗೆ ಹೋದಾಗ ಕುಬ್ಜೆಯಿಂದ ಕೇವಲ ಶ್ರೀಗಂಧವನ್ನು ಪಡೆದು,ಆಕೆಗೆ ಅತಿಷಯವಾದ ಅಂದವನ್ನು ಕೊಟ್ಟಿದ್ದನೆಂದರೆ ಆತನೆಷ್ಟು ಕರುನಾಳುವಾಗಿರಬಹುದು?
Hmmm ಕೇವಲ ಅವನ ಹೆಸರನ್ನು ಜಪಿಸಿದರೆ ಸಾಕು ಮಹಾ ಪಾತಕಗಳೇ ನಾಶವಾಗುತ್ತೆ ಎಂದರೆ ಅವನ ನಾಮವೆಷ್ಟು ಪವಿತ್ರವಾಗಿರಬಹುದು..?ಮಹಾನ್ ರಾಕ್ಷಸರನ್ನೇ ಸಂಹರಿಸಿ ಮೆರೆದಿದ್ದನೆಂದರೇ ಆತನೆಷ್ಟು ಶಕ್ತಿಶಾಲಿ?ನಮ್ಮಂತಹ ಎಷ್ಟೋ ಜೀವಿಗಳ ವಿಶಿಷ್ಟ ಸೃಷ್ಟಿಯ ಮೂಲವೇ ಇವನು ಎಂದರೆ ನಿಜವಾಗಿ ಆಶ್ಚರ್ಯ ವೇ ಸರಿ,.ಈತನೆಷ್ಟು ಕ್ರಿಯಾಶೀಲನಾಗಿದ್ದಿರಬಹುದು? ?
ಇದನ್ನೆಲ್ಲಾ ಕೇಳುತ್ತಿದ್ದರೆ ಅಥವಾ ಅವನ ಬಗೆಗೆ ಓದುತ್ತಿದ್ದಾಗಲೆಲ್ಲಾ ಅನೇಕ ಸಲ ಅನ್ನಿಸಿದ್ದಂತೂ ನಿಜ ಕೃಷ್ಣ ಮತ್ತೆ ಅವತರಿಸಬಹುದಿತ್ತಲ್ವಾ ಅಂತ....! ಈಗ ನೆಡೆಯುತ್ತಿರೋ ಘಟನೆಗಳೂ ಸಹ ನನ್ನ ಚಿಂತನೆಗೊಂದು ಕಾರಣ, ಸತ್ಯವಂತರಿಗಿದು ಕಾಲವಲ್ಲಯ್ಯಾ ಎಂಬಂತೆ ತನ್ನ ಸ್ವಾರ್ಥ ಸಾಧನೆಗೆ ಇತರರನ್ನು ಬಳಸಿಕೊಂಡು ಇತರರ ಕಾಲೆಳೆದು ಬದುಕುವ ಕಾಲವಿದು.. ನ್ಯಾಯ,ಸತ್ಯ,ಪ್ರಾಮಾಣಿಕತೆಯನ್ನು ಕಾಲಿನ ಕಸವಾಗಿಸಿ ಬದುಕು ಸಾಗಿಸುವವನಿಗಿಂದು ಕಾಲ,ತನ್ನದೆಲ್ಲವನ್ನೂ ಪರಮಾತ್ಮನಿಗೆ ಅರ್ಪಿಸಿ ತನ್ನಷ್ಟಕ್ಕೆ ತಾನು ಬದುಕು ಸಾಗಿಸುವವನಿಗೆ ಕಣ್ಣೀರು,ನೋವು,ನಿಂದೆ ಕಟ್ಟಿಟ್ಟ ಬುತ್ತಿ.. ಇವೆಲ್ಲಾ ಕ್ರೂರತನದ ಅಟ್ಟಹಾಸ ನಿಲ್ಲುವುದೆಂದು?ಪ್ರತಿಯೊಬ್ಬರಲ್ಲೂ ಉತ್ತಮತೆ ಮೂಡುವುದ್ಯಾವಾಗ??
ಮತ್ತೆ ಅದೇ ನಿರೀಕ್ಷೆ ,ಅವನ ಕೊಳಲ ನಾದಕ್ಕೆ ನಮ್ಮೆಲ್ಲರನ್ನೂ ಸೆರೆಹಿಡಿದಿದ್ದರೇ,...!! ಒಮ್ಮೆ ನಮ್ಮೆಲ್ಲರ ಹೃದಯ ಸಿಂಹಾಸನದಲ್ಲಿ ಕೂತ ಅವನೊಮ್ಮೆ ಹೊರ ಬಂದಿದ್ದರೆ ಎಲ್ಲಾದಕ್ಕೂ ತಿಲಾಂಜಲಿ ಇಡಬಹುದಿತ್ತೋ ಏನೋ ಅಂತ....

